ರೆಬಿಲಿಯಾಸ್, ಫ್ರಾಂಕಾಯಿಸ್
1494-1554. ಪ್ರಸಿದ್ಧ ಫ್ರೆಂಚ್ ವಿಡಂಬನಕಾರ ಹಾಗೂ ಹಾಸ್ಯಲೇಖಕ. ಈತ ಸು. 1494ರಲ್ಲಿ ಚಿನಾನ್ ಹತ್ತಿರದ ಲಾಡೆವಿನಿಯರ್ ಎಂಬಲ್ಲಿ ಜನಿಸಿದನೆಂದು ಭಾವಿಸಲಾಗಿದೆ. ಆ್ಯಂಟೋಯಿನ್ ಲೆಬಿಲಿಯಾಸ್ ಈತನ ತಂದೆ. ಆತ ಪ್ರಸಿದ್ಧ ವಕೀಲನಾಗಿದ್ದ. ರೆಬಿಲಿಯಾಸ್‍ನ ಆರಂಭದ ಜೀವನದ ವಿವರಗಳ ಬಗೆಗೆ ಹೆಚ್ಚಿನ ವಿಚಾರಗಳು ತಿಳಿದು ಬರುವುದಿಲ್ಲ. ಪಾಯಿಟುನಲ್ಲಿ ಈತ ಕ್ರಿಶ್ಚಿಯನ್ ಸನ್ಯಾಸಿಯಾಗಿದ್ದಾಗ ಪ್ರಾಚೀನ ಗ್ರೀಕ್ ಸಾಹಿತ್ಯವನ್ನು ಅಧ್ಯಯನ ಮಾಡಿದ. ಅನಂತರ ಬೆನಿಡೆಕ್ಟೈನ್ ಮೊನಾಸ್ಟರಿಯನ್ನು ಸೇರಿದ. ಅನಂತರ ಡಿ ಎಸ್ಟಿಸ್ಯಾಕ್ ಎಂಬ ಬಿಷಪ್ಪನ ಕಾರ್ಯದರ್ಶಿಯಾಗಿ ಅವನ ಅಧೀನದ ಆಡಳಿತ ಪ್ರಾಂತದ ಪ್ರವಾಸಗಳಲ್ಲಿ ಭಾಗವಹಿಸಿದ. ಪಾಶಿಯರ್ಸ್ ವಿಶ್ವವಿದ್ಯಾಲಯದ ಹಲವಾರು ಉಪನ್ಯಾಸಗಳಿಗೆ ಹಾಜರಾದ. ಈ ಅವಧಿಯಲ್ಲಿ ಇವನು ಹಲವಾರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿರಬೇಕು. ಇವನ ಬರೆಹಗಳಲ್ಲಿ ಇದಕ್ಕೆ ಹಲವಾರು ಆಧಾರಗಳು ಸಿಕ್ಕುತ್ತವೆ. ಅನಂತರ ಇವನು ಪ್ಯಾರಿಸ್‍ಗೆ ಬಂದು ಸನ್ಯಾಸತ್ವವನ್ನು ತ್ಯಜಿಸಿದ. 1530ರಲ್ಲಿ ವೈದ್ಯಕೀಯ ಪದವಿ ಪಡೆದ. 1532ರಲ್ಲಿ ಲಿಯೋನ್ಸ್ ಗೆ ಬಂದ. ಅಲ್ಲಿದ್ದ ಸಾಹಿತ್ಯಕ ಸನ್ನಿವೇಶದಿಂದ ಗಾಢವಾಗಿ ಪ್ರಭಾವಿತನಾದ. ಬಹುಶಃ ಈ ಕಾಲದಲ್ಲಿಯೇ ಇವನು, ಆಗ ಪ್ರಚಲಿತವಾಗಿ ಜನಪ್ರಿಯವಾಗಿ ದ್ದ ಗರ್ಗಂಟುವಾ ಎಂಬ ದೈತ್ಯನಿಗೆ ಸಂಬಂಧಿಸಿದ ಸಾಹಸ ಕಾರ್ಯಗಳ ರೊಮಾನ್ಸ್‍ಗಳನ್ನು ಓದಿ ಅವುಗಳಿಂದ ಆಕರ್ಷಿತನಾದ. ಇದೇ ರೀತಿಯ ಗ್ರಂಥ ರಚನೆ ಮಾಡಲು ಯೋಚಿಸಿದ. ವೈದ್ಯವೃತ್ತಿಯಿಂದ ಆಗುತ್ತಿದ್ದ ಸಂಪಾದನೆ ಸಾಕಾಗುತ್ತಿರಲಿಲ್ಲವಾದ್ದರಿಂದ ಗರ್ಗಂಟುವಾನನ್ನು ಕುರಿತ ಗ್ರಂಥರಚನೆಗೆ ಕೈಹಾಕಿದ. 1532ರ ನವೆಂಬರ್‍ನಲ್ಲಿ ಆಲ್ಕೋ ಫಿಬಾಸ್ ನೇಸಿಯರ್ ಎಂಬ ಕಲ್ಪಿತ ಹೆಸರಿನಲ್ಲಿ ಗರ್ಗಂಟುವಾ ಮತ್ತು ಪ್ಯಾಂಟ್ಯಾಗ್ರುಯಲ್ ಗ್ರಂಥವನ್ನು ಬರೆದು ಪ್ರಕಟಿಸಿದ. ಇದು ಪ್ರಕಟವಾದ ಕೂಡಲೇ ಜನಪ್ರಿಯವಾಯಿತು. ಇದಕ್ಕೆ ಇವನು ಇಟ್ಟ ಪೂರ್ಣ ಹೆಸರು ಗರ್ಗಂಟುವಾ ಮತ್ತು ಅವನ ಮಗ ಪ್ಯಾಂಟ್ಯಾಗ್ರುಯಲ್‍ರ ಜೀವನ, ಸಾಹಸಕಾರ್ಯ ಮತ್ತು ಹೇಳಿಕೆಗಳು ಈ ಕೃತಿಯಲ್ಲಿರುವ ಮುಖ್ಯಪಾತ್ರಗಳು ದೈತ್ಯರಾಜ ಗ್ರಾನ್‍ಕೋಸಿಯರ್ ಅವನ ಹೆಂಡತಿ ಗಾರ್ಗಮೆಲ್ಲೆ, ಅವರ ಮಗ ಗರ್ಗಂಟುವಾ, ಗರ್ಗಂಟುವಾನ ಮಗ ಪ್ಯಾಂಟ್ಯಾಗ್ರುಯಲ್, ಒಬ್ಬ ಬುದ್ಧಿವಂತ ರ್ಯಾಸ್ಕಲ್ ಪನುರ್ಗೆ, ಒಬ್ಬ ಲಂಪಟ ಸನ್ಯಾಸಿ ಫ್ರಯರ್ ಜಾನ್ ಆಫ್ ದಿ ಫನಲ್ಸ್. ಪ್ಯಾರಿಸ್‍ನ ಬಿಷಪ್ ಆಗಿ ಅನಂತರ ಕಾರ್ಡಿನಲ್ ಆದ ಜೀನ್‍ಡು ಬೆಲ್ಲಯ್ ಎಂಬವನ ಆಶ್ರಯ ಇವನಿಗೆ ದೊರೆತು ಅವನೊಂದಿಗೆ 1534ರ ಜನವರಿಯಲ್ಲಿ ರೋಮ್ ಪ್ರಯಾಣ ಮಾಡಿದ. ಅಲ್ಲಿದ್ದ ಮೂರು ತಿಂಗಳ ಅವಧಿಯಲ್ಲಿ ರೋಮ್ ಬಗೆಗೆ ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ಪ್ಯಾರಿಸ್‍ಗೆ ಹಿಂದಿರುಗಿದ ಅನಂತರ ಪ್ರಾಚೀನ ರೋಮ್‍ನ ನಕ್ಷೆಯನ್ನು ಬರೆದ. 1534ರ ಮೇನಲ್ಲಿ ಲಿಯೋನ್ಸ್‍ನ ತನ್ನ ಮೂಲ ವೈದ್ಯಕೀಯ ವೃತ್ತಿಗೆ ಹಿಂದಿರುಗಿದ. 1537ರಲ್ಲಿ ವೈದ್ಯಕ್ಕೆ ಸಂಬಂಧಿಸಿದ ಡಾಕ್ಟೊರೇಟ್ ಪದವಿ ಪಡೆದ. ಫ್ರಾನ್ಸ್‍ಗೆ ಆರುತಿಂಗಳ ಕಾಲ ಭೇಟಿ ನೀಡಿದ ಸಂದರ್ಭವನ್ನು ಉಪಯೋಗಿಸಿಕೊಂಡು ಈಗಾಗಲೇ ಪ್ರಕಟಿಸಿದ್ದ ಪ್ಯಾಂಟ್ಯಾಗ್ರುಯಲ್ ಮತ್ತು ಗರ್ಗಂಟು ವಾ ಕೃತಿಯನ್ನು ಪರಿಷ್ಕರಿಸಿದ. 1546ರಲ್ಲಿ ಥರ್ಡ್ ಬುಕ್ ಆಫ್ ದಿ ಹಿಸ್ಟರಿ ಆಫ್ ಪ್ಯಾಂಟ್ಯಾಗ್ರುಯಲ್ ಪ್ಯಾರಿಸ್ಸಿನಲ್ಲಿ ಪ್ರಕಟವಾಯಿತು. 1552ರಲ್ಲಿ ನಾಲ್ಕನೆಯ ಸಂಪುಟ (ಫೋರ್ತ್ ಬುಕ್ ಆಫ್ ಪ್ಯಾಂಟ್ಯಾಗ್ರುಯಲ್) ಪ್ರಕಟವಾಯಿತು; ಸಾಕಷ್ಟು ಟೀಕೆಗೂ ಒಳಗಾಯಿತು. ಬಹುಶಃ ಈ ಕಾರಣಕ್ಕಾಗಿ ಈತ ಜೈಲಿಗೂ ಹೋಗಬೇಕಾಗಿ ಬಂದಿತೆಂದು ಹೇಳಲಾಗಿದೆ. ಇವನು ಎಲ್ಲಿ ಯಾವಾಗ ನಿಧನನಾದ ಎಂಬುದರ ಬಗೆಗೂ ನಿರ್ದಿಷ್ಟವಾಗಿ ತಿಳಿದಿಲ್ಲ. ಬಹುಶಃ ಇವನು ಪ್ಯಾರಿಸ್ಸಿನಲ್ಲಿ ಸು. 1554ರಲ್ಲಿ ನಿಧನ ಹೊಂದಿರ ಬೇಕೆಂದು ಅಭಿಪ್ರಾಯಪಡಲಾಗಿದೆ.

ಇವನ ಮರಣದ ಅನಂತರ 1564ರಲ್ಲಿ ಫಿಫ್ತ್ ಬುಕ್ ಆಫ್ ಪ್ಯಾಂಟ್ಯಾಗ್ರುಯಲ್ ಪ್ರಕಟವಾಯಿತು. ಈತ ಪತ್ರಗಳು, ಕವನಗಳು ಇತ್ಯಾದಿಗಳನ್ನು ಬರೆದಿದ್ದಾನೆ. ಆದರೆ ಇವನ ಕೀರ್ತಿನಿಂತಿರುವುದು ಐದು ಸಂಪುಟಗಳಲ್ಲಿರುವ ವಿಡಂಬನಾತ್ಮಕ ಗ್ರಂಥ ಗರ್ಗಂಟುವಾ ಮತ್ತು ಪ್ಯಾಂಟ್ಯಾಗ್ರುಯಲ್‍ರ ಸಾಹಸಗಳು ಎಂಬುದರ ಮೇಲೆ. ಕಟು ವಿಡಂಬನ ಪ್ರಕಾರಕ್ಕೆ ಸೇರಿದ ಈ ಗ್ರಂಥದಲ್ಲಿ ಬರುವ ಪಾತ್ರಗಳು ದೈತ್ಯವಂಶಕ್ಕೆ ಸೇರಿದವು. ದೈತ್ಯಾಕೃತಿಯ ಇವರು ಮಹಾಭೋಜನ ಪ್ರಿಯರು, ಮದ್ಯಪಾನ ಪ್ರಿಯರು, ಸದಾ ಉಲ್ಲಾಸದಿಂದ ಕೂಡಿದವರು, ಅಷ್ಟೇ ದಯಾವಂತರು. ವಿಮರ್ಶಕರು ಈ ಕೃತಿಯ ಉದ್ದೇಶ ಮತ್ತು ಅಲ್ಲಿರುವ ಅನ್ಯೋಕ್ತಿ ಇತ್ಯಾದಿಗಳನ್ನು ವಿಶ್ಲೇಷಿಸಲು, ವಿವರಿಸಲು ಯತ್ನಿಸಿದ್ದಾರೆ. ಒಂದಾದ ಮೇಲೊಂದರಂತೆ ಸಂಕೀರ್ಣ ಸನ್ನಿವೇಶಗಳು, ಹಾಸ್ಯಪ್ರಸಂಗಗಳು, ವಿಡಂಬನೆಗಳು, ಭತ್ರ್ಸನೆಗಳು, ಗಂಭೀರ ಪ್ರಸಂಗಗಳು, ಅಶ್ಲೀಲ ಎನ್ನಬಹುದಾದ ಸಂದರ್ಭಗಳು, ಸುಂದರವಾದ ಸಂದರ್ಭಗಳು ಈ ಕೃತಿಯಲ್ಲಿ ಹಾಸುಹೊಕ್ಕಾಗಿ ಬರುತ್ತವೆ. ಗ್ರಾಮ್ಯ ಮತ್ತು ಶಿಷ್ಟಪ್ರಯೋಗಗಳನ್ನು ಧಾರಾಳವಾಗಿ ಮಿಶ್ರಣ ಮಾಡುವ, ಪಾರದರ್ಶಕ, ನೇರ ಹಾಗೂ ವಿಡಂಬನಾತ್ಮಕವಾಗಿರುವ ಈ ಕೃತಿಯ ಶೈಲಿ ವಿಶಿಷ್ಟವಾದದ್ದಾಗಿದೆ. ಅರ್ಥ ಕಳೆದುಕೊಂಡ ಸಿದ್ಧಾಂತಗಳು ಮತ್ತು ಸಂಸ್ಥೆಗಳು ಇಲ್ಲಿ ವಿಡಂಬನೆಗೆ ಒಳಗಾಗಿವೆ. ಕಟುವಿಡಂಬನೆ ಮತ್ತು ವ್ಯಂಗ್ಯಚಿತ್ರಗಳ ಮಧ್ಯೆ ಗಂಭೀರವಾದ ತಾತ್ತ್ವಿಕ ಚಿಂತನೆಗಳೂ ಸ್ಥಾನಪಡೆದಿವೆ. ಪುನರುತ್ಥಾನ ಕಾಲದ ಜೀವನದ ಬಗೆಗಿನ ಉತ್ಸಾಹ, ಜ್ಞಾನದಾಹ ಹಾಗೂ ಮಧ್ಯಯುಗವು ಮಾನವನ ಸೃಜನಶೀಲತೆಯ ಮೇಲೆ ಹೇರಿದ ಪ್ರತಿರೋಧಗಳ ಬಗೆಗಿನ ವಿರೋಧ-ಇತ್ಯಾದಿಗಳು ಈ ಕೃತಿಯಲ್ಲಿ ಅಭಿವ್ಯಕ್ತಗೊಂಡಿವೆ. ರೋಮನ್ ಕ್ಯಾಥೋಲಿಕ್ ಚರ್ಚ್‍ನ ಕಟುವಾದ ವಿಡಂಬನೆ ಇವನ ಕೃತಿಗಳಲ್ಲಿದ್ದರೂ ಇವನು ಪ್ರಾಟೆಸ್ಟಂಟ್ ಆಗಲಿಲ್ಲ. ಇವನ ಕಾಲದ ಇತರ ಮಾನವತಾವಾದಿಗಳಂತೆಯೇ ಇವನೂ ಸರ್ಕಾರ ಮತ್ತು ಚರ್ಚಿನ ಟೀಕಾಕಾರನಾಗಿದ್ದನೇ ಹೊರತು ವಿರೋಧಿ ಯಾಗಿರಲಿಲ್ಲ.
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ